ಅಂತಾರಾಷ್ಟ್ರೀಯ ಸುರಕ್ಷತಾ ಕ್ರಮ ಅಕಾರ್ಡ್ (Accord)

ಅಮೆರಿಕಾಕ್ಕೆ ಉಡುಪುಗಳನ್ನು ರಫ್ತುಮಾಡುವ ದೇಶಗಳ ಪೈಕಿ ಬಾಂಗ್ಲಾ ದೇಶವು ನಾಲ್ಕನೆಯ ದೊಡ್ಡ ದೇಶವಾಗಿದೆ. ಬಾಂಗ್ಲಾದೇಶದ ಒಟ್ಟು ರಫ್ತು ಪ್ರಮಾಣದಲ್ಲಿ ಶೇ.80 ರಷ್ಟು ಭಾಗವು ಗಾರ್ಮೆಂಟ್ಸ್ ಉದ್ಯಮದ್ದಾಗಿದೆ ಮತ್ತು ಉದ್ಯಮವು ಸುಮಾರು 3.5 ಮಿಲಿಯನ್ ಕಾರ್ಮಿಕರನ್ನು ಹೊಂದಿದೆ. ಈ ಕಾರ್ಮಿಕರು ಬಡತನದ ವೇತನ, ಬೈಗುಳ, ದೈಹಿಕ ಕಿರುಕುಳ, ಉತ್ತಮ ವಾತಾವರಣವನ್ನು ಆಗ್ರಹಿಸಿದರೆ ಕೆಲಸದಿಂದ ತೆಗೆದುಹಾಕುವುದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅಸುರಕ್ಷಿತ ಕಾರ್ಖಾನೆ ಕಟ್ಟಡಗಳಿಂದ  ಅತ್ಯಂತ ಕೆಟ್ಟ ಕೆಲಸದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಈ ಅಸುರಕ್ಷಿತ ಕಟ್ಟಡಗಳಿಂದಾಗಿ 2005 ರಿಂದೀಚೆಗೆ ಕಟ್ಟಡ ಕುಸಿತ ಮತ್ತು ಬೆಂಕಿ ಅಪಘಾತಗಳಂತಹ ದುರ್ಘಟನೆಗಳು ಸುಮಾರು 2000 ಬಾಂಗ್ಲಾದೇಶೀ ಕಾರ್ಮಿಕರನ್ನು ಕೊಂದುಹಾಕಿವೆ. ಇವೆಲ್ಲವೂ ತಡೆಗಟ್ಟಬಹುದಾದಂತಹ ದುರಂತಗಳಾಗಿದ್ದವು. ಏಪ್ರಿಲ್ 2013 ರಲ್ಲಿ ಸಂಭವಿಸಿದ, ಗಾರ್ಮೆಂಟ್ಸ್ ಉದ್ಯಮದ ಇತಿಹಾಸದಲ್ಲಿಯೇ ಅತ್ಯಂತ ಭೀಕರವೆಂದು ಪರಿಗಣಿಸಲಾದ ರಾನಾಪ್ಲಾಜಾ ಕಟ್ಟಡ ಕುಸಿತದ ದುರ್ಘಟನೆಯೊಂದರಲ್ಲಿಯೇ 1,134 ಕಾರ್ಮಿಕರು ಸಾವಿಗೀಡಾದರು. ರಾನಾಪ್ಲಾಜಾ ಕಟ್ಟಡದಲ್ಲಿದ್ದ ಗಾಮೆಂಟ್ಸ್ ಕಾರ್ಖಾನೆಗಳು ಪ್ರಮುಖ ಬ್ರಾಂಡ್‍ಗಳಾದ ಜೆ.ಸಿ ಪೆನ್ನಿ, ದಿ ಚಿಲ್ಡ್ರನ್ಸ್ ಪ್ಲೇಸ್ ಮತ್ತು ವಾಲ್‍ಮಾರ್ಟ್‍ಗಳಿಗೆ ಉತ್ಪಾದಿಸುತ್ತಿದ್ದವು. ದುರ್ಘಟನೆಗೂ ಕೆಲವೇ ತಿಂಗಳುಗಳ ಹಿಂದೆ ಈ ಬ್ರಾಂಡ್‍ಗಳು ಫ್ಯಾಕ್ಟರಿಗಳ ಆಡಿಟ್ ನಡೆಸಿದ್ದವು, ಆದರೂ ಈ ಕಟ್ಟಡದಲ್ಲಿ ಉಲ್ಲಂಘನೆಯಾಗಿದ್ದ ಸುರಕ್ಷತಾ ಕ್ರಮಗಳನ್ನು ಸರಿಪಡಿಸಲು ವಿಫಲವಾಗಿದ್ದ ಪರಿಣಾಮವಾಗಿ ಈ ದುರಂತವು ನಡೆದಿತ್ತು.

 

ಅಕಾರ್ಡ್ (Accord):  ಒಂದು ಹೊಸ ಮಾದರಿ

ಬ್ರಾಂಡ್‍ಗಳು ಬಾಂಗ್ಲಾದೇಶದಲ್ಲಿರುವ ತಮ್ಮ ಸಪ್ಲೈಯರ್ ಕಾರ್ಖಾನೆಗಳಲ್ಲಿ ಉತ್ತಮ ಸುರಕ್ಷತಾ ಕ್ರಮಗಳನ್ನು ಖಾತ್ರಿಪಡಿಸಿಕೊಳ್ಳಬೇಕಾದಲ್ಲಿ ಬೆಂಕಿ ಅಪಘಾತ ಮತ್ತು ಕಟ್ಟಡ ಕುಸಿತದಂತಹ ವಿಷಯಗಳಲ್ಲಿ ಅವು ತಮ್ಮ ಧೋರಣೆಗಳನ್ನು ಮೂಲಭೂತವಾಗಿ ಬದಲಿಸಿಕೊಳ್ಳಬೇಕೆಂದು WRC ಯು 2013 ರ ರಾನಾ ಪ್ಲಾಜಾ ದುರಂತಕ್ಕೂ ಮುಂಚಿನಿಂದಲೂ ಅಪಾರೆಲ್ ಬ್ರಾಂಡ್‍ಗಳನ್ನು ಒತ್ತಾಯಿಸುತ್ತಿತ್ತು. ಈ ದುರ್ಘಟನೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಬ್ರಾಂಡ್‍ಗಳು ಚೌಕಾಸಿಗೆ ಮುಂದೆ ಬರಲು ಕಾರಣವಾಗಿತ್ತು. ಕೊನೆಗೆ ಬಾಂಗ್ಲಾದೇಶದ ಕಟ್ಟಡ ಮತ್ತು ಬೆಂಕಿ ಅಪಘಾತಗಳ ಬಗ್ಗೆ ಸುರಕ್ಷತಾ ಕ್ರಮವಾಗಿ ಐತಿಹಾಸಿಕ ಒಪ್ಪಂದ ಅಕಾರ್ಡ್ (Accord) ಸಹಿ ಹಾಕುವಂತೆ ಬ್ರಾಂಡ್‍ಗಳ ಮನವೊಲಿಸಲು WRC ಮತ್ತು ಇತರ ನಮ್ಮ ಒಕ್ಕೂಟ ಸಂಘಟನೆಗಳು ಯಶಸ್ವಿಯಾದವು. ಈ ಒಪ್ಪಂದವು ಕಾರ್ಮಿಕರು, ಕಾರ್ಖಾನೆಯ ಮ್ಯಾನೇಜರ್ ಮತ್ತು ಅಪಾರೆಲ್ ಕಂಪನಿಗಳ ನಡುವೆ ನಡೆದ ಈ ಆಧುನಿಕ ಯುಗದ ಮೊದಲ ಕಾನೂನು ರೀತ್ಯಾ ಒಪ್ಪಂದವಾಗಿದ್ದು, ಇದರ ಪ್ರಕಾರ ಬ್ರಾಂಡ್ ಮತ್ತು ರೀಟೈಲರ್‍ಗಳು;

  • ಅರ್ಹತೆಯುಳ್ಳ ತಜ್ಞರು ಮತ್ತು ಇಂಜಿನಿಯರ್‍ಗಳು ನಡೆಸುವ ಸ್ವತಂತ್ರ ತನಿಖೆಗೆ ತಮ್ಮ ಸಪ್ಲೈಯರ್ ಕಾರ್ಖಾನೆಗಳನ್ನು ಮುಕ್ತಗೊಳಿಸಬೇಕು.
  • ಯಾರಾದರೂ ಮಾಹಿತಿ ಹುಡುಕಿದಾಗ ಈ ತನಿಖೆಗಳ ಫಲಿತಗಳು ಸಿಗುವಂತೆ ಸಾರ್ವಜನಿಕಗೊಳಿಸಲು ಅನುಮತಿಸಬೇಕು.
  • ಅವಶ್ಯಕ ಸುರಕ್ಷತಾ ಪುನರ್ ನವೀಕರಣ ಕೆಲಸಕ್ಕೆ ಧನ ಸಹಾಯ ಮಾಡಬೇಕು.
  • ಸುರಕ್ಷತೆಯ ಬಗ್ಗೆ ರಿಪೇರಿ ಕ್ರಮ ಕೈಗೊಳ್ಳಲು ನಿರಾಕರಿಸುವ ಕಾರ್ಖಾನೆಗಳೊಂದಿಗೆ ವ್ಯವಹಾರವನ್ನು ನಿಲ್ಲಿಸಬೇಕು.

ಇದೆಲ್ಲದರ ಜೊತೆಗೆ ಕಾರ್ಮಿಕರು ತಮ್ಮ ಕಾರ್ಖಾನೆಯಲ್ಲಿ ಸಂಭವಿಸಬಹುದಾದ ಉಲ್ಲಂಘನೆಗಳ ಬಗ್ಗೆ ಅನಾಮಧೇಯವಾಗಿ ವರದಿ ಮಾಡಲು ಅನುಕೂಲವಾಗುವಂತೆ ಒಂದು ದೂರು ವ್ಯವಸ್ಥೆಯನ್ನೂ ಅಕಾರ್ಡ್ ರಚಿಸಿದೆ. ಅಕಾರ್ಡ್ ಒಪ್ಪಂದಕ್ಕೆ ಸಹಿ ಹಾಕಿಯೂ ಅದಕ್ಕೆ ಬದ್ಧರಾಗದವರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಲು ಅನುವು ಮಾಡಿಕೊಡುವ ವ್ಯವಸ್ಥೆಯನ್ನೂ ಅಕಾರ್ಡ್ ಹೊಂದಿದೆ.

ಗಾರ್ಮೆಂಟ್ಸ್ ಕಂಪನಿಗಳಲ್ಲಿ ನಡೆಯುತ್ತಿರುವ ಸುರಕ್ಷತಾ ಕ್ರಮಗಳ ಉಲ್ಲಂಘನೆಯನ್ನು ಮೂಲಭೂತವಾಗಿಯೇ ಯಾವ ರೀತಿ ಬದಲಿಸಬಹುದು ಎಂಬುದನ್ನು ಅರ್ಕಾರ್ಡ್ ಪ್ರತಿನಿಧಿಸುತ್ತದೆ. ಈ ಮೊದಲಿನ ಕ್ರಮಗಳೆಲ್ಲ ಕಾರ್ಪೊರೇಟ್ ಪ್ರಣೀತ ಕ್ರಮಗಳಾಗಿದ್ದು, ಅದನ್ನು ಜಾರಿಗೊಳಿಸುವ ಕ್ರಮದಲ್ಲಿ ಮತ್ತು ಪಾರದರ್ಶಕತೆಯಲ್ಲಿ ಕೊರತೆಯಿತ್ತು. ಆದರೆ ಅಕಾರ್ಡ್ ಅಡಿಯಲ್ಲಿ ತಮಗಾಗಿ ದುಡಿಯುವ ಕಾರ್ಮಿಕರು ಸುರಕ್ಷಿತ ವಾತಾವರಣದಲ್ಲಿ ದುಡಿಯುವುದನ್ನು ಖಾತ್ರಿಪಡಿಸಿಕೊಳ್ಳಲು ಬ್ರಾಂಡ್ ಮತ್ತು ರೀಟೈಲರ್‍ಗಳು ಕಾನೂನು ಬದ್ಧವಾಗಿ ಜವಾಬ್ದಾರರಾಗುತ್ತಾರೆ.

 

ಅಕಾರ್ಡ್ ಇಂದು:

2018 ರ ಅಕಾರ್ಡ್ ಒಪ್ಪಂದಕ್ಕೆ ಸುಮಾರು 200 ಬ್ರಾಂಡ್‍ಗಳು ಸಹಿ ಹಾಕಿದ್ದವು ಮತ್ತು ಮೂಲ ಒಪ್ಪಂದವನ್ನು ಮತೂ ಮೂರು ವರ್ಷಕ್ಕೆ ವಿಸ್ತರಿಸಲಾಗಿತ್ತು. ವಿವಿಧ ಬ್ರಾಂಡ್‍ಗಳ ಜೊತೆಗೆ ಪ್ರಪಂಚದ ನಾಲ್ಕು ದೊಡ್ಡ ಫ್ಯಾಷನ್ ಬ್ರಾಂಡ್‍ಗಳಲ್ಲಿ ಮೂರು ಅಂದರೆ H&M, Inditex, ಮತ್ತು UNIQLO ಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ. ಒಟ್ಟಾರೆ ಈ ಎಲ್ಲ ಬ್ರಾಂಡ್‍ಗಳು ಬಾಂಗ್ಲಾದೇಶದ 1600 ಕಾರ್ಖಾನೆಗಳಲ್ಲಿ ಉತ್ಪಾದಿಸುತ್ತಿವೆ ಮತ್ತು ಸುಮಾರು ಎರಡು ಮಿಲಿಯನ್ ಕಾರ್ಮಿಕರನ್ನು ಹೊಂದಿವೆ.

ಕಾರ್ಖಾನೆಗಳ ದೋಷಪೂರಿತ ಕಟ್ಟಡ ರಚನೆಯಿಂದ ಹಿಡಿದು, ಬೆಂಕಿ ಅಪಘಾತವಾದಾಗ  ಹೊರಹೋಗಲು ಬಳಸುವ ದಾರಿಯ ಅಸುರಕ್ಷತೆಯವರೆಗೂ ಸುಮಾರು 130,000 ಉಲ್ಲಂಘನೆಗಳು ಅಕಾರ್ಡ್ ಅಡಿಯಲ್ಲಿ ನಡೆದ ತನಿಖೆಗಳಿಂದ ಅನಾವರಣಗೊಂಡಿವೆ. ಆದರೆ ಇಂದು, ಇಂತಹ ಬಹಳಷ್ಟು ಅಸುರಕ್ಷತಾ ವ್ಯವಸ್ಥೆಗಳು ನಿರ್ಮೂಲನೆಯಾಗಿವೆ.

ಬಾಂಗ್ಲಾದೇಶದ ಅಕಾರ್ಡ್ ಕಚೇರಿಯು ತನ್ನ ಕಾರ್ಯಚಟುವಟಿಕೆಗಳನ್ನು ಹೊಸದಾಗಿ ಆರಂಭವಾದ ಸಂಸ್ಥೆ, ದಿ ರೆಡಿಮೇಡ್ ಗಾರ್ಮೆಂಟ್ ಸಸ್ಟೈನಿಬಿಲಿಟಿ ಕೌನ್ಸಿಲ್ (RSC)ಗೆ 2020 ರ ಜೂನ್ 1 ರಂದು ಹಸ್ತಾಂತರಗೊಳಿಸಿತು. ಈ ಸಂಸ್ಥೆಯು ಅಕಾರ್ಡ್‍ನಲ್ಲಿ ವಿವರಿಸಿರುವ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸುವುದನ್ನು ಮುಂದುವರೆಸಲು ರಚನೆಯಾಗಿದೆಯೇ ಹೊರತು ಅಕಾರ್ಡ್ ಒಪ್ಪಂದವನ್ನು  ಸ್ಥಳಾಂತರಗೊಳಿಸುವ ಯಾವುದೇ ಉದ್ದೇಶ ಇದಕ್ಕಿಲ್ಲ. 2021 ಆಗಸ್ಟ್ 30 ರಂದು ಒಪ್ಪಂದದ ಅವಧಿಯು ಮುಗಿಯುವವರೆಗೂ ಅರ್ಕಾರ್ಡ್ ಅಡಿಯಲ್ಲಿ ಇದ್ದ ಬ್ರಾಂಡ್‍ಗಳ ಒಪ್ಪಂದವು ಹಾಗೇ ಉಳಿಯುತ್ತದೆ.

ಸಾವಿರಾರು ಕಾರ್ಮಿಕರ ಸಾವುನೋವುಗಳನ್ನು ತಡೆದ ಕಾರಣಕ್ಕೆ ಮತ್ತು ಹಲವಾರು ಕಾರ್ಖಾನೆಗಳು ಇನ್ನೂ ನವೀಕರಣವಾಗಬೇಕಾದ್ದರಿಂದ ಅಕಾರ್ಡ್ ಒಪ್ಪಂದ ಮುಂದುವರೆಯಬೇಕು ಎಂದು ಕಾರ್ಮಿಕ ಸಂಘಟನೆಗಳು ಮತ್ತು ಕಾರ್ಮಿಕ ವಕೀಲರು ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಅಲ್ಲದೆ ಈ ಮಾದರಿಯು ಕಾರ್ಮಿಕರ ಜೀವವು ಅಪಾಯದಲ್ಲಿರುವ ಪಾಕಿಸ್ತಾನದಂತಹ ಇನ್ನಿತರ ದೇಶಗಳಿಗೆ ವಿಸ್ತರಣೆಯಾಗಬೇಕು ಎಂದು ಹೇಳಲಾಗಿದೆ.

ಈ ಬಗ್ಗೆ 2021 ರ ಬೇಸಿಗೆಯಲ್ಲಿ ನಡೆದ ಚೌಕಾಸಿಯಲ್ಲಿ ಅಕಾರ್ಡ್‍ನಿಂದ ಬಾಂಗ್ಲಾದೇಶ ಪಡೆದ ಎಲ್ಲ ಲಾಭಗಳೂ ಹಾಗೇ ಉಳಿದುಕೊಳ್ಳುತ್ತವೆ ಹಾಗೂ ಅದು ಮತ್ತೂ ಮುಂದುವರೆಯುತ್ತದೆ ಎಂಬ ಫಲಿತಾಂಶವು ಯಶಸ್ವಿಯಾಗಿ ಹೊರಬಂದಿತು. 2021 ಸೆಪ್ಟೆಂಬರ್ 1 ರಿಂದ ಜಾರಿಯಾಗಿ ಮುಂದಿನ 26 ತಿಂಗಳ ಕಾಲ ಮುಂದುವರೆಯುವ ಈ ಹೊಸ ಅಂತಾರಾಷ್ಟ್ರೀಯ ಸುರಕ್ಷತಾ ಒಪ್ಪಂದವು ಈ ಮೊದಲು ಇದ್ದ ಅಕಾರ್ಡ್‍ನ ಎಲ್ಲ ಅಂಶಗಳನ್ನೂ ಹಾಗೇ ಉಳಿಸಿಕೊಂಡಿದೆ. ಅವುಗಳಲ್ಲಿ ಬ್ರಾಂಡ್‍ಗಳ ಬದ್ಧತೆಯನ್ನು ಕಾನೂನು ರೀತ್ಯಾ ಜಾರಿಗೊಳಿಸುವುದು, ಕೆಲಸದ ಸ್ಥಳವನ್ನು ಸುರಕ್ಷಿತಗೊಳಿಸಲು ಬೇಕಾದ ಕ್ರಮ ಕೈಗೊಳ್ಳಲು ಸಪ್ಲೈಯರ್‍ಗಳಿಗೆ ಧನ ಸಹಾಯ ನೀಡುವುದು, ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸಲು ನಿರಾಕರಿಸುವ ಸಪ್ಲೈಯರ್‍ಗಳೊಂದಿಗೆ ವ್ಯವಹಾರ ಸಂಬಂಧ ಕೊನೆಗೊಳಿಸುವುದು ಸೇರಿದಂತೆ ಎಲ್ಲವೂ ಹಾಗೇ ಮುಂದುವರೆಯಲಿದೆ. ಬಾಂಗ್ಲಾದೇಶದಲ್ಲಿ ಸಾವಿರಾರು ಕಾರ್ಮಿಕರ ಜೀವ ಉಳಿಸಿದ ಈ ಒಪ್ಪಂದವು  ಕಾರ್ಮಿಕರ ಜೀವವು ದಿನನಿತ್ಯ ಅಪಾಯದಲ್ಲಿರುವ ಇತರ ದೇಶಗಳಿಗೂ ವಿಸ್ತರಣೆಯಾಗುತ್ತದೆ. ಟೆಕ್ಸ್‍ಟೈಲ್ ಮತ್ತು ಗಾರ್ಮೆಂಟ್ ಉದ್ಯಮದಲ್ಲಿ ಆರೋಗ್ಯ ಮತ್ತು ಸುರಕ್ಷೆಯನ್ನು ಕಾಪಾಡಲು ರಚನೆಯಾಗಿರುವ ಈ ಹೊಸ ಅಕಾರ್ಡ್ ಒಪ್ಪಂದಕ್ಕೆ ಸುಮಾರು 170 ಅಪಾರೆಲ್ ಬ್ರಾಂಡ್‍ಗಳು ಸಹಿ ಹಾಕಿವೆ.

 

WRC ಪಾತ್ರ

ಅಕಾರ್ಡ್ ಒಪ್ಪಂದವು ಜಾರಿಯಾಗುವಂತೆ ನೋಡಿಕೊಳ್ಳಲು WRC ಯು ತಾನು ವಹಿಸುತ್ತಿದ್ದ ಗಂಭೀರ ಪಾತ್ರವನ್ನು ಮುಂದುವರೆಸುತ್ತದೆ. ಅಕಾರ್ಡ್ ಸ್ಟೀರಿಂಗ್ ಕಮಿಟಿಯಲ್ಲಿ ಸಾಕ್ಷಿಯಾಗಿ ಸಹಿ ಹಾಕಿರುವ  WRC ಯು, ಅಕಾರ್ಡ್ ತತ್ವಗಳು ಪೂರ್ಣವಾಗಿ ಕಾರ್ಯಗತಗೊಳ್ಳಲು ಮತ್ತು ತನಿಖೆಗಳು ಮತ್ತು ರಿಪೇರಿ ಕೆಲಸಗಳು ಕಾಲಕಾಲಕ್ಕೆ ನಡೆಯುವಂತೆ ನೋಡಿಕೊಳ್ಳಲು ಸ್ಟೀರಿಂಗ್ ಕಮಿಟಿಯ ಸದಸ್ಯರೊಂದಿಗೆ ಕೂಡಿ ಕೆಲಸ ಮಾಡುತ್ತದೆ.